ಚಿರಲ್, ಇಗ್ನೇಷಿಯಸ್ ವ್ಯಾಲೆಂಟೈನ್
1852-1929. ಬ್ರಿಟಿಷ್ ಪತ್ರಕರ್ತ. ಇವನ ವಿದ್ಯಾಭ್ಯಾಸ ಮುಖ್ಯವಾಗಿ ಫ್ರಾನ್ಸಿನಲ್ಲಿ ನಡೆಯಿತು. ಸಾರ್ಬಾನ್‍ನಲ್ಲಿ ಪದವಿ ಪಡೆದ ಮೇಲೆ ಸ್ವಲ್ಪಕಾಲ (1872-1876) ವಿದೇಶಾಂಗ ಕಚೇರಿಯಲ್ಲಿ ಕಾರಕೂನನಾಗಿದ್ದ. ಪಶ್ಚಿಮ ಏಷ್ಯ, ಭಾರತ, ಆಸ್ಟ್ರೇಲಿಯ ಮೊದಲಾದ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಂಚಾರ ಮಾಡಿದ (1876-1892). ಅನಂತರ 1892ರಿಂದ 1896ರ ವರೆಗೆ ಬರ್ಲಿನ್ನಲ್ಲಿ ಲಂಡನ್ ಟೈಮ್ಸ್ ಪತ್ರಿಕೆಯ ಬಾತ್ಮೀದಾರನಾಗಿ, 1899-1912ರಲ್ಲಿ ಟೈಮ್ಸ್‍ನ ವಿದೇಶ ಇಲಾಖೆಯ ಅಧಿಕಾರಿಯಾಗಿ, 1908-1912ರಲ್ಲಿ ಟೈಮ್ಸ್ ಪ್ರಕಟಣ ಕಂಪನಿಯ ಮಂಡಲಿಯ ಸದಸ್ಯನಾಗಿ ಇದ್ದ. ಟ್ವಿಕ್ಸ್ಟ್ ಗ್ರೀಕ್ ಅಂಡ್ ಟರ್ಕ್ (1881), ದಿ ಫಾರ್ ಈಸ್ಸರ್ನ್ ಕ್ವೆಶ್ಚನ್ (1896), ದಿ ಮಿಡ್ಲ್ ಈಸ್ಟರ್ನ್ ಕ್ವೆಶ್ಚನ್ (1903), ಇಂಡಿಯನ್ ಅನ್‍ರೆಸ್ಟ್ (1910), ದಿ ಈಜಿಪ್ಷಿಯನ್ ಪ್ರಾಬ್ಲೆಮ್ (1920), ದಿ ಆಕ್ಸಿಡೆಂಟ್ ಅಂಡ್ ದಿ ಓರಿಯೆಂಟ್ (1924)-ಇವು ಅವನು ಬರೆದ ಕೆಲವು ಪುಸ್ತಕಗಳು.

	ಲಾರ್ಡ್ ಕರ್ಜನ್ ದೆಹಲಿ ದರ್ಬಾರಿನ ವಿವರಣೆಯನ್ನು ವರದಿಮಾಡಲು 1908ರಲ್ಲಿ ಚಿರಲನನ್ನು ಭಾರತಕ್ಕೆ ಬರಮಾಡಿಕೊಂಡ. ಭಾರತ ರಾಷ್ಟ್ರೀಯ ಚಳವಳಿ ಕೇವಲ ಆಕಸ್ಮಿಕವಾದ್ದೇ ಅಥವಾ ಸಹಜವಾಗಿ ರಾಷ್ಟ್ರವ್ಯಾಪ್ತಿಯಾದ್ದೇ ಎಂಬುದನ್ನು ಪರಿಶೀಲಿಸಲೂ ಅದನ್ನು ಉಪಶಮನಗೊಳಿಸಲು ಸುಧಾರಣಾಮಾರ್ಗ ಅನುಸರಿಬೇಕೆ ಅಥವಾ ಬಲಪ್ರಯೋಗ ಕೈಗೊಳ್ಳಬೇಕೆ ಎಂಬ ಬಗ್ಗೆ ಸಲಹೆ ನೀಡಲೂ ಅವನನ್ನು ನೇಮಿಸಲಾಗಿತ್ತು (1910). ಅವನು ಈ ದೃಷ್ಟಿಯಿಂದ ವಿಪುಲವಾಗಿ ಮಾಹಿತಿ ಸಂಗ್ರಹಿಸಿ ತನ್ನ ವರದಿಯನ್ನು ಸಿದ್ಧಪಡಿಸಿದ ; ಅನಂತರ ಅದರ ಆಧಾರದ ಮೇಲೆ ಇಂಡಿಯನ್ ಅನ್‍ರೆಸ್ಟ್ ಎಂಬ ಗ್ರಂಥವನ್ನು ಪ್ರಕಟಿಸಿದ. ಅವನು ಬ್ರಿಟಿಷ್ ಸಾಮ್ರಾಜ್ಯನೀತಿಯ ಪ್ರತಿಪಾದಕನಾಗಿದ್ದುದರಿಂದ ಭಾರತ ರಾಷ್ಟೀಯ ಆಂದೋಳನದ ನಿಜವಾದ ಸ್ವರೂಪವನ್ನು ಅರಿಯಲಾಗಲಿಲ್ಲ. ರಾಷ್ಟ್ರೀಯ ಚಳವಳಿ ನಗರವಾಸಿಗಳಾದ ಹಿಂದೂಗಳಿಗೂ ಮಹಾರಾಷ್ಟ್ರ, ಮಧ್ಯಭಾರತ, ಬಂಗಾಳ, ಪಂಜಾಬುಗಳಿಗೂ ಸೀಮಿತವಾದ್ದೆಂದೂ ಆದ್ದರಿಂದ ಭಾರತಕ್ಕೆ ಸ್ವರಾಜ್ಯದ ಹಕ್ಕು ನೀಡುವುದು ಉಹಾತೀತವೆಂದೂ ಆಡಳಿತದಲ್ಲಿ ಹಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾತ್ರ ಪರಿಶೀಲಿಸಬಹುದೆಂದೂ ಅವನು ವರದಿ ಮಾಡಿದ. ಲೋಕಮಾನ್ಯ ಬಾಲಗಂಗಾಧರ ತಿಲಕರಿಗೆ ಸಂಬಂಧಿಸಿದಂತೆ ಮುಂಬಯಿಯ ಆಡಳಿತವರ್ಗದಿಂದ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಹಲವು ಅನ್ಯಾಯವಾದ ಹೇಳಿಕೆಗಳು ಅವನ ಕೃತಿಯಲ್ಲಿ ಸೇರಿದ್ದುವು. ತಿಲಕರು ಅವನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದರು. ಕೆಳ ನ್ಯಾಯಾಲಯದಲ್ಲಿ ಚಿರಲ್‍ಗೆ ವಿರುದ್ಧವಾದ ತೀರ್ಪು ಹೊರಬಂತು. ಮೇಲಿನ ನ್ಯಾಯಾಲಯಕ್ಕೆ ಚಿರಲ್ ಮೇಲ್ಮನವಿ ಸಲ್ಲಿಸಿದ. ಸಾಮ್ರಾಜ್ಯ ಹಿತಾಸಕ್ತಿಗಳ ಪ್ರವೇಶದಿಂದ ಅಲ್ಲಿ ಚಿರಲ್‍ಗೆ ಅನುಕೂಲವಾಗಿ ತೀರ್ಪಾಯಿತು. ಅವನು ಅನಂತರ ಇಂಡಿಯ ಓಲ್ಡ್ ಅಂಡ್ ನ್ಯೂ ಎಂಬ ಗ್ರಂಥ ರಚಿಸಿದ. ಭಾರತ ರಾಷ್ಟ್ರೀಯ ಚಳವಳಿಯ ಬಗ್ಗೆಯಾಗಲಿ ನಾಯಕರ ವಿಷಯವಾಗಿಯಾಗಲಿ ಅವನು ನ್ಯಾಯಬದ್ಧವಾದ ನಿಲುವು ತಳೆಯಲಿಲ್ಲ. ಚಿರಲ್‍ಗೆ ಬ್ರಿಟಿಷ್ ದೊರೆಯಿಂದ ಸರ್ ಪದವಿ ಪ್ರಾಪ್ತವಾಗಿತ್ತು. ಅವನು 1924ರಲ್ಲಿ ಮರಣಹೊಂದಿದ.						(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ